
ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಮೂಡಿರುವ ಅಸಮಾಧಾನ ಶಮನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜಕೀಯ ತಂತ್ರ ರೂಪಿಸಿದ್ದು, ತಮ್ಮ ಆಪ್ತ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರಿಗೆ ಮಹತ್ವದ ಹುದ್ದೆ ನೀಡಿದ್ದಾರೆ.
ಆಸೀಫ್ ಸೇಠ್ ಅವರನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (BUDA) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸೇಠ್, ಅಲ್ಪಸಂಖ್ಯಾತ ಕೋಟಾದಡಿ ಸಂಪುಟದಲ್ಲಿ ಸ್ಥಾನ ನೀಡುವಂತೆ ಹೈಕಮಾಂಡ್ ಮಟ್ಟದಲ್ಲಿ ಹಲವು ಬಾರಿ ಲಾಬಿ ನಡೆಸಿದ್ದರು ಎನ್ನಲಾಗಿದೆ.
ಸಚಿವ ಸ್ಥಾನಕ್ಕಾಗಿ ಅವರು ನಾಲ್ಕೈದು ಬಾರಿ ದೆಹಲಿಗೆ ತೆರಳಿ ನಾಯಕರನ್ನು ಭೇಟಿಯಾಗಿದ್ದರು. ಅವರ ಬೆಂಬಲಕ್ಕೆ ಕಿತ್ತೂರು ಕರ್ನಾಟಕ ಭಾಗದ ಮುಸ್ಲಿಂ ಧರ್ಮಗುರುಗಳು ಹಾಗೂ ಸಮುದಾಯದ ಮುಖಂಡರು ಬೆಳಗಾವಿಯಲ್ಲಿ ಸಮಾವೇಶ ನಡೆಸಿ ಸೇಠ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು.
ಆದರೆ ಸಂಪುಟದಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಸೇಠ್ ಅವರನ್ನು BUDA ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಈ ಹಿಂದೆ BUDA ಅಧ್ಯಕ್ಷರಾಗಿದ್ದ ಲಕ್ಷ್ಮಣರಾವ್ ಚಿಂಗಳೆ ಅವರನ್ನು ಸ್ಥಾನದಿಂದ ತೆರವುಗೊಳಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿಂಗಳೆ ಅವರಿಗೆ ಟಿಕೆಟ್ ಕೈತಪ್ಪಿದ ಬಳಿಕ ಅಸಮಾಧಾನ ಶಮನಗೊಳಿಸಲು BUDA ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಆದರೆ ಇದೀಗ ಕಾಂಗ್ರೆಸ್‌ನ ಹೊಸ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಚಿಂಗಳೆ ಬದಲಿಗೆ ಆಸೀಫ್ ಸೇಠ್ ಅವರನ್ನು ನೇಮಕ ಮಾಡಲಾಗಿದೆ. ಈ ಬೆಳವಣಿಗೆ ಬೆಳಗಾವಿ ಕಾಂಗ್ರೆಸ್‌ನಲ್ಲಿನ ಆಂತರಿಕ ರಾಜಕೀಯಕ್ಕೂ ಹೊಸ ತಿರುವು ನೀಡಿದೆ.
